ರೈ, ಐಶ್ವರ್ಯ
1975-. ವಿಶ್ವಸುಂದರಿಯಾಗಿ ಆಯ್ಕೆಗೊಂಡ (1994) ಕನ್ನಡತಿ; ರೂಪದರ್ಶಿ, ಚಲನಚಿತ್ರ ನಟಿ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 1975ರಲ್ಲಿ ಜನಿಸಿದರು. ಬೆಳೆದಿದ್ದು, ಓದಿದ್ದು ಮುಂಬಯಿಯಲ್ಲಿ. ವಿಶ್ವಸುಂದರಿಯಾಗುವ ಮುನ್ನ ಮುಂಬಯಿಯಲ್ಲಿ ರೂಪದರ್ಶಿಯಾಗಿದ್ದರು. ವಿಶ್ವಸುಂದರಿಯ ಪಟ್ಟ ಭಾರತದ ಬಾಲಿವುಡ್ (ಮುಂಬಯಿ) ಚಿತ್ರಜಗತ್ತಿನ ಪ್ರವೇಶಕ್ಕೆ ಹೆಬ್ಬಾಗಿಲು ಎಂಬ ಮಾತಿದೆ. ವಿಶ್ವಸುಂದರಿಯ ಪಟ್ಟ ಲಭಿಸಿದ ಒಂದು ವರ್ಷದೊಳಗೆ ಇವರು ಮಣಿರತ್ನಂ ನಿರ್ಮಿಸಿದ ತಮಿಳು ಚಿತ್ರ ಇರುವರ್ ಮೂಲಕ ಚಿತ್ರರಂಗ ಪ್ರವೇಶಿಸಿದರು.
ಅನಂತರ ಔರ್ ಪ್ಯಾರ್ ಹೋಗಯಾ, ಜೀನ್ಸ್ ಮೊದಲಾದ ಹಿಂದಿ ಚಿತ್ರಗಳಲ್ಲಿ ನಟಿಸಿದರೂ ಅವು ಸಫಲವಾಗಲಿಲ್ಲ. ಆ ಅಬ್ ಲೌಟ್ ಚಲೇ, ಹಮ್ ದಿಲ್ ದೇ ಚುಕೇ ಸನಮ್, ತಾಲ್, ದೇವದಾಸ್, ಹಮ್ ತೋ ತೇರೇ ಹೈ ಸನಮ್, ದಿಲ್ ಕಾ ರಿಶ್ತಾ ಮೊದಲಾದ ಹಿಂದಿ ಚಲನಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಅನುಪಮ ಸೌಂದರ್ಯದ ಜೊತೆಗೆ ಅಭಿನಯ ಕೌಶಲವನ್ನೂ ಮೈಗೂಡಿಸಿಕೊಂಡಿರುವುದರಿಂದ ಚಿತ್ರರಂಗದಲ್ಲಿ ಇವರಿಗೆ ಯಶ ದೊರೆಯುತ್ತಿದೆ ಎಂಬುದು ವಿಮರ್ಶಕರ ಅಭಿಪ್ರಾಯ. ಬ್ರೈಡ್ ಅಂಡ್ ಪ್ರಿಜ್ಯುಡಿಸ್ (2004) ಇವರ ಇತ್ತೀಚಿನ ಇಂಗ್ಲಿಷ್ ಚಿತ್ರ.	
(ವಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ